ಸಾವಯವ ಕೃಷಿಯಲ್ಲಿ ಸಾಮಾನ್ಯ ಸಂದೇಹಗಳು

  1. ಸಾವಯವ ಕೃಷಿಯನ್ನು ಹೇಗೆ ವ್ಯಾಖ್ಯಾನಿಸಬಹುದು ?

ಪ್ರಕೃತಿಯಲ್ಲಿ ಯಾವುದೇ ಅಸಮತೋಲನವನ್ನು ತಾರದೆ ಮಾನವ ತನ್ನ ಬೇಡಿಕೆಗಳನ್ನು ಪೂರೈಸಿಕೊಳ್ಳುವ ವಿಧಾನವೇ ಸಾವಯವ ಕೃಷಿ.

2. ಕೃತಕ ರಾಸಾಯನಿಕಗಳನ್ನು ಬಳಸದಿದ್ದರೂ ಕೃಷಿ ಉತ್ಪನ್ನಗಳನ್ನು ಸಾವಯವವೆಂದು ಪರಿಗಣಿಸುವುದು ಮೂರನೇ ವರ್ಷದ ನಂತರ, ಇದಕ್ಕೆ ಕಾರಣವೇನು ?

ಮಣ್ಣು ಕೃತಕ ರಾಸಾಯನಿಕ ಅವಶೇಷಗಳ ಮುಕ್ತವಾಗಲು ಎರಡು ವರ್ಷಗಳ ಸಮಯ ಬೇಕಾದ ಕಾರಣ, ಆ ಸಮಯದಲ್ಲಿ ಬೆಳೆಯುವ ವಿಧಾನಗಳು ಸಾವಯವ ಆಗಿದ್ದರೂ ಆ ಉತ್ಪನ್ನಗಳನ್ನು ಸಾವಯವ ಉತ್ಪನ್ನಗಳೆಂದು ಪರಿಗಣಿಸಲಾಗುವುದಿಲ್ಲ.

3. ಸಾವಯವ ಕೃಷಿ ಮಾಡುವುದು ಕಷ್ಟ ಏಕೆ ?

ಈಗಿನ ಪೀಳಿಗೆಯ ಅನೇಕ ಯುವ ರೈತಭಾಂದವರು ನಮ್ಮ ಭಾರತೀಯ ಕೃಷಿ ವಿಧಾನಗಳ ಜ್ಞಾನದಿಂದ ವಂಚಿತರಾಗಿದ್ದಾರೆ ಮತ್ತು ಈಗಿನ ಕೃತಕ ರಾಸಾಯನಿಕ ಕೃಷಿ ವಿಧಾನಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಈಗಿನ ವಿಧಾನಗಳನ್ನೇ ಬಳಸಿ ಸಾವಯವ ಕೃಷಿ ಮಾಡಲು ಹೊರಟ ಕಾರಣ ಅವರಿಗೆ ಕಷ್ಟವನಿಸುತ್ತದೆ ಮತ್ತು ಅವರಿಗೆ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಬೇಕಿದೆ. ನಿಜಾಂಶವೇನೆಂದರೆ ಸಾವಯವ ಕೃಷಿ ಅಥವಾ ಭಾರತೀಯ ಸಾಂಪ್ರದಾಯಿಕ ಕೃಷಿ, ಈಗಿನ ಕೃಷಿ ವಿಧಾನಗಳಿಗೆ ಹೋಲಿಸಿದರೆ ಸುಲಭ, ಅಗ್ಗ ಹಾಗು ಗುಣಮಟ್ಟದ ಇಳುವರಿಯನ್ನು ನಿರೀಕ್ಷಿಸಬಹುದು.

4. ಸಾವಯವ ಕೃಷಿ ಬಹಳ ನಿಧಾನ ಏಕೆ ?

ಹಾಗೇನು ಇಲ್ಲ, ಯಾವುದೇ ಗಿಡ, ಸಸಿ ಅಥವಾ ಮರಕ್ಕೆ ಬೇಕಾದ ಪೋಷಕಗಳನ್ನು ಗುರುತಿಸಿ ಸರಿಯಾದ ಸಮಯಕ್ಕೆ ನೀಡಿದರೆ ಉತ್ತಮ ಇಳುವರಿಯನ್ನು ಪಡೆಯ ಬಹುದು. ಕೊಟ್ಟಿಗೆ ಗೊಬ್ಬರವನ್ನು ನೇರವಾಗಿ ನೀಡುವ ಬದಲು ಕಾಂಪೋಸ್ಟಾಗಿ ಪರಿವರ್ತಿಸಿ ಸರಿಯಾದ ಪ್ರಮಾಣದಲ್ಲಿ ನೀಡಿದಲ್ಲಿ ತಪ್ಪದೆ ಉತ್ತಮ ಇಳುವರಿ ನಿರೀಕ್ಷಿಸಬಹುದು. ಆದರೆ ಕೃತಕ ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುತ್ತಿರುವ ಮಣ್ಣು ಸಂಪೂರ್ಣವಾಗಿ ಕೃತಕ ರಾಸಾಯನಿಕ ಅವಶೇಷಗಳನ್ನು ಕಡಿಮೆಗೊಳಿಸಲು ಕನಿಷ್ಟ ಎರಡು ವರ್ಷ ಬೇಕಿರುತ್ತದೆಂದು ನಮ್ಮ ಸಾವಯವ ಮಾರ್ಗಸೂಚಿಗಳು ತಿಳಿಸಿರುವ ಕಾರಣ, ಆ ಮಣ್ಣಿನಲ್ಲಿ ಬೆಳೆಯುವ ಬೆಳೆಗಳು ಸಾವಯವ ಉತ್ಪನ್ನಗಳೆನ್ನಿಸಿಕೊಳ್ಳಲು ಕನಿಷ್ಟ ಎರಡು ವರ್ಷ ಸಾವಯವ ವಿಧಾನಗಳನ್ನು ಬಳಸ ಬೇಕು, ನಂತರ ಅಲ್ಲಿ ಬೆಳೆಯುವ ಎಲ್ಲಾ ಉತ್ಪನ್ನಗಳು ಸಾವಯವ, ಈ ಕಾರಣವೂ ರೈತರಿಗೆ ನಿಧಾನವೆನ್ನಿಸಿರಬಹುದು.

5. ಸಾವಯವ ಕೃಷಿ ಉತ್ಪನ್ನಗಳ ಜೊತೆ ಜೊತೆಗೆ ಕೃತಕ ರಾಸಾಯನಿಕಗಳನ್ನು ಬಳಸ ಬಹುದಾ ?

ಬಳಸ ಬಹುದು, ಆದರೆ ಅಲ್ಲಿ ಬೆಳೆದ ಉತ್ಪನ್ನಗಳು ಮಾತ್ರ ಸಾವಯವ ಉತ್ಪನ್ನಗಳಾಗಿರುವುದಿಲ್ಲ, ಆ ಕೃಷಿ ವಿಧಾನಗಳನ್ನು GAP ಎಂದು ಕರೆಯುವುದುಂಟು. GAP ಅಂದರೆ GOOD AGRICULTURAL PRACTICES.

6. ಸಾವಯವ ಕೃಷಿಯಲ್ಲಿ ಹೆಚ್ಚಿನ ಲಾಭಗಳಿಸಲಾಗುವುದಿಲ್ಲವೆಂಬ ಅಪನಂಬಿಕೆ ಇದೆ. ನಿಜವೆ ?

ಮೊದಲ ಎರಡು ವರ್ಷಗಳು ಭೂಮಿ ಸಾವಯವಕ್ಕೆ ಪರಿವರ್ತಿಸಲು ಮೀಸಲಿಟ್ಟಾಗ, ಹೆಚ್ಚಿನ ಸಾವಯವ ಒಳಸುರಿವುಗಳನ್ನು ನೀಡುವ ಅವಶ್ಯವಿರುತ್ತದೆ, ಅವನ್ನು ನೀಡದಿದ್ದಲ್ಲಿ ಇಳುವರಿ ಕಡಿಮೆಯಾಗುವ ಕಾರಣ ಹೆಚ್ಚಿನ ಲಾಭ ನಿರೀಕ್ಷಿಸಲಾಗದ ಕಾರಣ ಈ ಅಪನಂಬಿಕೆ ಮೂಡಿದೆ. ಆದರೆ ನೈಜ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಇಳುವರಿ ಮತ್ತು ಲಾಭ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.

7. ಸಾವಯವ ಕೃಷಿಯಲ್ಲಿ ಹೆಚ್ಚಿನ ನೀರು ಅವಶ್ಯವಿರುವುದಿಲ್ಲ ಏಕೆ ?

ಹೌದು, ನೈಜ ಸಾವಯವ ಕೃಷಿಯ ವಿಧಾನಗಳನ್ನು ಪಾಲಿಸುವ ಕಾರಣ ಕ್ರಮೇಣ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿ, ಮಣ್ಣಿಗೆ ನೀರನ್ನು ಅಥವಾ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ, ಈ ಕಾರಣದಿಂದ ಸಾವಯವಕ್ಕೆ ಪರಿವರ್ತಿತವಾದ ಭೂಮಿಗಳು ಅತಿ ಕಡಿಮೆ ನೀರಿನಲ್ಲಿ ಉತ್ತಮ ಇಳುವರಿಯ ಜೊತೆಗೆ ಗುಣಮಟ್ಟವನ್ನೂ ನಿರೀಕ್ಷಿಸಬಹುದು.

8. ಸಾವಯವ ಬೆಳೆಗಾರರನ್ನು ಎರಡು ವರ್ಷಗಳನಂತರ ಸಾವಯವ ರೈತರೆಂದು ಪರಿಗಣಿಸುತ್ತಾರೆ ಏಕೆ ?

ಸಾವಯವ ಪ್ರಮಾಣನ ಪತ್ರ ಪಡೆಯಲಿರುವ ನಿಯಮಗಳ ಪ್ರಕಾರ, ಒಬ್ಬ ರೈತ ಸಾವಯವದಲ್ಲಿ ವ್ಯವಸಾಯ ಮಾಡುತ್ತಿದ್ದರೂ ಅವರನ್ನು ಮೊದಲ ಎರಡು ವರ್ಷಗಳು ಅವರನ್ನು ಸಾವಯಕ್ಕೆ ಪರಿವರ್ತನೆ ಹೊಂದುತ್ತಿರುವ ರೈತರೆಂದು ಪರಿಗಣಿಸುತ್ತಾರೆ, ಈ ಎರಡು ವರ್ಷಗಳಲ್ಲಿ ಈ ಹಿಂದೆ ರೈತರು ಬಳಸಿರುವ ಕೃತಕ ರಾಸಾಯನಿಕಗಳ ಅವಶೇಷಗಳು ಕಡಿಮೆಯಾಗಿ ನಂತರದ ಬೆಳೆಗಳಲ್ಲಿ ಕೃತಕ ರಾಸಾಯನಿಕ ಮುಕ್ತವಾಗುವ ಸಂಭವವಿರುತ್ತದೆ ಆದ ಕಾರಣ ಎರಡು ವರ್ಷಗಳ ನಂತರವೇ ರೈತರನ್ನು ಸಾವಯವ ರೈತರೆಂದು ಗುರುತಿಸುತ್ತಾರೆ.

9. ಮೊದಲ ಕೆಲ ವರ್ಷಗಳು ಸಾವಯವ ಕೃಷಿಯಲ್ಲಿ ಇಳುವರಿ ಕಡಿಮೆ ಇರುತ್ತದೆ ಏಕೆ ?

ಅಲ್ಪಮಟ್ಟಿಗೆ ಸರಿ ಅನ್ನಿಸಿದರೂ, ನೈಜ ಸಾವಯವ ಕೃಷಿ ವಿಧಾನಗಳನ್ನು ಪಾಲಿಸಿದಲ್ಲಿ ಉತ್ತಮ ಇಳುವರಿಯನ್ನು ನಿರೀಕ್ಷಿಸಬಹುದು, ಇದಕ್ಕೆ ಪ್ರಮುಖ ಕಾರಣ, ಹಿಂದಿನ ಕೃತಕ ರಾಸಾಯನಿಕ ಪದ್ಧತಿಗಳ ಕಾರಣ, ಆ ಮಣ್ಣಿನಲ್ಲಿ ಕೃಷಿಗೆ ಅನಕೂಲ ಮಾಡುವು ಸೂಕ್ಷ್ಮ ಜೀವಿಗಳು ಮತ್ತು ಕ್ಷೇತ್ರಜೀವಿಗಳ ಅಸಮತೋಲನದ ಕಾರಣ ಮೊದಲ ಕೆಲ ವರ್ಷಗಳು ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಈಗ ಇರುವ ಅನೇಕ ಸಾವಯವ ಒಳಸುರಿವುಗಳನ್ನು ಉಪಯೋಗಿಸುವುದರಿಂದ ಮೊದಲ ಬೆಳೆಯಿಂದಲೆ ಯಾವುದೇ ರಾಜಿ ಇಲ್ಲದೆ ಉತ್ತಮ ಇಳುವರಿಯನ್ನು ಪಡೆಯಬಹುದು.

10. ಸಾವಯವ ಪ್ರಮಾಣನ ದೃಢೀಕರಣ ಪತ್ರದ ಪ್ರಾಮುಖ್ಯತೆಯೇನು ?

ಸಾವಯವ ಉತ್ಪನ್ನಗಳ ಬಗ್ಗೆ, ಯಾವುದೇ ಕೃತಕ ರಾಸಾಯನಿಕಗಳನ್ನು ಬಳಸದೆ ಬೆಳೆ ಮಾಡಿದ ಕೃಷಿ ಉತ್ಪನ್ನಗಳ ಬಗ್ಗೆ ಒಂದು ನಂಬಿಕೆಯ ಸಂಕೇತವೇ ಸಾವಯವ ಪ್ರಮಾಣನ ದೃಢೀಕರಣ ಪತ್ರ. ಇದನ್ನು ಯಾವುದೇ ರೈತರು ಪಡೆಯ ಬಹುದು ಮತ್ತು ಪಡೆಯಲು, ಸಾವಯವ ಪ್ರಮಾಣನ ದೃಢೀಕರಣ ಪತ್ರ ನೀಡುವ ಸಂಸ್ಥೆಯಲ್ಲಿ ನೋಂದಾಯಿತರಾಗಿ, ಅವರು ವಿಧಿಸುವ ನಿಯಮಗಳನ್ನು ಮತ್ತು ಶರತ್ತುಗಳನ್ನು ಪಾಲಿಸ ಬೇಕು. ಹೀಗೆ ಪಾಲಿಸುವ ಮುಖಾಂತರ ವಿಷಮುಕ್ತ ಆಹಾರವನ್ನು ಉತ್ಪಾದಿಸಬಹುದಾಗಿದೆ.

11. ಬೇಸಿಗೆಯಲ್ಲಿ ಅಥವಾ ತಾಪಮಾನ ಹೆಚ್ಚಿದಾಗ ಕೀಟಗಳ ಸಮಸ್ಯೆ ಹೆಚ್ಚುತ್ತದೆ, ಕಾರಣವೇನು ?

ಬೇಸಿಗೆಯಲ್ಲಿ ಕಳೆ ಮತ್ತು ಇತರೆ ಸಸ್ಯಗಳು ನೀರಿಲ್ಲದ ಕಾರಣ ಒಣಗುತ್ತವೆ ಮತ್ತು ರೈತರು ತಮ್ಮ ಬೆಳೆಗಳಿಗೆ ನೀರನ್ನು ನೀಡುವುದರಿಂದ ಬೆಳೆಗಳು ಹಸಿರಾಗಿರುತ್ತವೆ, ಹಾಗಾಗಿ ಹಸಿರು ಕೀಟಗಳನ್ನು ಆಕರ್ಷಿಸಿ ರೈತರ ಬೆಳೆಗಳಲ್ಲಿ ಹೆಚ್ಚು ಕೀಟಗಳು ಕಾಣಿಸುತ್ತವೆ. ತಾಪಮಾನ ಹೆಚ್ಚಿದಾಗ ಅನೇಕ ಕೀಟಗಳು ಮೊಟ್ಟೆಗಳಿಂದ ಹೊರಬರುತ್ತವೆ, ಇದು ಸಹ ಕೀಟಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

12. ಮಳೆಗಾಲ ಮತ್ತು ಚಳಿಗಾಲದಲ್ಲಿ ಬೆಳೆ ರೋಗಗಳು ಹೆಚ್ಚಲು ಕಾರಣವೇನು ?

ಬೆಳೆ, ಸಸಿ ಅಥವಾ ಮರಗಳಿಗೆ ರೋಗ ಅಂದರೆ ಅದು ಸೂಕ್ಷ್ಮ ಜೀವಿಗಳಾದ ಬ್ಯಾಕ್ಟೀರಿಯಾ, ಫಂಗೈ ಅಥವಾ ವೈರಸ್ ಗಳಿಂದುಂಟಾಗುವ ಬೆಳೆ ನಾಶ. ವಾತಾವರಣದಲ್ಲಿ ಮತ್ತು ಮಣ್ಣಿನಲ್ಲಿ ತೇವಾಂಶ ಮಳೆಗಾಲದಲ್ಲಿ ಹೆಚ್ಚಾಗಿರುವ ಕಾರಣ, ಈ ಸೂಕ್ಮ ಜೀವಿಗಳ ಪ್ರಸರಣ ಮತ್ತು ಅವುಗಳ ಉತ್ಪತ್ತಿ ತೀವ್ರವಾಗಿರುತ್ತದೆ. ಈ ಕಾರಣದಿಂದ ಮಳೆ ಮತ್ತು ಚಳಿಗಾಲಗಳಲ್ಲಿ ರೋಗಗಳು ಹೆಚ್ಚು.

13. ಕಳೆ ಸಮಸ್ಯೆ

ಕಳೆ ಪ್ರತಿ ರೈತರನ್ನು ಕಾಡುವ ಸಮಸ್ಯೆಯಾಗಿದೆ. ಕಳೆಯನ್ನು ಸಮಸ್ಯೆಯೆಂದು ಪರಿಗಣಿಸದೆ ಕೆಲ ಉತ್ತಮ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡರೆ ಕಳೆಯನ್ನು ನಿಯಂತ್ರಣದಲ್ಲಿ ಇಡಬಹುದು. ಇದಕ್ಕೆ ಕಳೆ ನಾಶಕಗಳು ಯಾವುದೇ ಕಾರಣಕ್ಕೆ ಸಮಂಜಸ ಮತ್ತು ಅಂತಿಮ ಪರಿಹಾರವಲ್ಲ. ರೈತರು ಕಳೆ ವೃಧಿ ಮತ್ತು ಪ್ರಸರಣಗಳ ಬಗ್ಗೆ ತಿಳಿಯ ಬೇಕಿರುತ್ತದೆ.

  • ರೈತರು ಕೊಟ್ಟಿಗೆ ಗೊಬ್ಬರವನ್ನು ನೇರವಾಗಿ ತಮ್ಮ ಭೂಮಿಗೆ ಹಾಕದೆ 90 ದಿನ ತಿಪ್ಪಯಲ್ಲಿ ಕಳೆಯವಂತೆ ಮಾಡಿ ಬಳಸಿದಲ್ಲಿ ಕೊಟ್ಟಿಗೆ ಗೊಬ್ಬರದಿಂದ ಬರುವ ಕಳೆ ಬೀಜಗಳನ್ನು ನಾಶಪಡಿಸಿ ನಿಯಂತ್ರಿಸ ಬಹುದು.

  • ಅನೇಕ ರೈತರಿಗೆ ಕುರಿ ಮಂದೆಗಳನ್ನು ಬಿಡುವ ಅಭ್ಯಾಸವಿರುತ್ತದೆ, ಕುರಇ ಗೊಬ್ಬರ ಒಳ್ಳೆಯದೆ ಆದರೆ, ಕುರಿ ಹಿಕ್ಕೆಯಲ್ಲಿ ಬರುವ ಬೀಜಗಳಿಂದ ಕಳೆ ಹೆಚ್ಚುತ್ತದೆ. ಇದರಿಂದಾಗಿ ಕುರಿ ಗೊಬ್ಬರವನ್ನು ತಿಪ್ಪೆ ಮಾಡಿ ಬಳಸುವುದು ಉತ್ತಮ.

  • ಕಳೆಗೆ ಸರಿಯಾದ ಬೆಳೆ ಪರಿವರ್ತನೆ ಮಾಡದಿರುವುದು ಸಹ ಮುಖ್ಯ ಕಾರಣವಾಗಿದೆ. ಒಂದೇ ತರಹದ ಬೆಳೆಗಳನ್ನು ಬೆಳೆಯುವ ಕಾರಣ, ಭೂಮಿಯಲ್ಲಿನ ಪೋಷಕಗಳಲ್ಲಿ ಅಸಮತೋನವಾಗಿ, ಆ ಅಸಮತೋಲನವನ್ನು ಬಳಸಿ ಹಲವು ಕಳೆಗಳು ಬೆಳೆಯುತ್ತವೆ, ಇವುಗಳನ್ನು ತಡೆಯಲು ಬಹಳ ಕಷ್ಟ. ಉದಾಹರಣೆಗೆ: ಗೇಕು ಅಥವಾ ತುಂಗೆ

14. ಸಾವಯವ ಕೃಷಿಯಲ್ಲಿ ಬೆಳೆ ಪರಿವರ್ತನೆಯ ಪ್ರಾಮುಖ್ಯತೆ ಮತ್ತು ವಿಶೇಷತೆ ತಿಳಿಸಿ.

ಬೆಳೆ ಪರಿವರ್ತನೆ ನಿಯಮ ಬಹಳ ಪ್ರಮುಖವಾದ ಅಂಶ, ಇದರ ಕಾರಣ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತದೆ ಮತ್ತು ಮಣ್ಣಿನಲ್ಲಿರುವ ಸ್ವಾಭಾವಿಕ ರಾಸಾಯನಿಕಗಳಲ್ಲಿ ಸಮತೋಲನ ಕಾಪಾಡಬಹುದು, ಕಳೆಯಲ್ಲೂ ಸಹ ನಿಯಂತ್ರಣ ಕಾಣ ಬಹುದು.

15. ರಾಸಾಯನಿಕ ಗೊಬ್ಬರಗಳು ಮಣ್ಣಿನ ಫಲವತ್ತೆಯನ್ನು ಹೇಗೆ ಕಡಿಮೆ ಮಾಡುತ್ತವೆ ?

ಸತತ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಫಾಸ್ಫೇಟ್, ಸಲ್ಫೇಟ್ ಮತ್ತು ನೈಟ್ರೇಟ್ ಗಳು ಹೆಚ್ಚಾಗಿ ಮಣ್ಣು ಮೃದುತ್ವವನ್ನುಕಳೆದುಕೊಳ್ಳುತ್ತದೆ, ರಾಸಾಯನಿಕಗಳಿಂದ ಮಣ್ಣಿನ ಜೈವಿಕ ಮತ್ತು ಕ್ಷೇತ್ರಜೀವಿಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಯಾವುದೇ ಫಲವತ್ತಾದ ಮಣ್ಣಿನಲ್ಲಿ ಮೃದತ್ವವನ್ನು ಮತ್ತು ಕ್ಷೇತ್ರ ಜೀವಿಗಳನ್ನು ಕಾಣಬಹುದು.

16. ಎರೆ ಹುಳ ರೈತನ ಮಿತ್ರ ಹೇಗೆ ?

ರೈತರು ಗಮನಿಸ ಬೇಕಾಗಿರುವುದೇನೆಂದರೆ, ಯಾವುದೇ ಕೀಟ, ಕ್ರಿಮಿ ರೈತರಿಗೆ ಶತ್ರುವಲ್ಲ, ಪ್ರತಿ ಜೀವಿಯೂ ಮಿತ್ರನೆ ಹಾಗೆ ಎರೆ ಹುಳ ಸಹ ಮಿತ್ರ. ಒಂದೊಂದು ಕೀಟ/ಕ್ರಿಮಿ ಒಂದು ಕೃಷಿಗೆ ಪೂರಕವಾಗಿ ವರ್ತಿಸುತ್ತವೆ, ಆದರೆ ನಮ್ಮವಿಧಾನಗಳಿಂದ ಅಸಮತೋಲನಗೊಂಡಲ್ಲಿ ಅವುಗಳಿಂದ ಸಮಸ್ಯೆ ಉದ್ಬವವಾಗುತ್ತದೆ.

ಎರೆ ಹುಳ ಒಂದು ರೀತಿ ನೈಸರ್ಗಿಕ ನೇಗಿಲು ಭೂಮಿಯನ್ನು ಆಳಕ್ಕೆ ಕೊರೆದು, ಅನೇಕ ದ್ರವಗಳನ್ನು ಶ್ರವಿಸಿ ಭೂಮಿಯನ್ನು ಫಲವತ್ತಾಗಿ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

17. ರಾಸಾಯನಿಕ ಕೃಷಿಯಲ್ಲಿ ಹೆಚ್ಚು ನೀರು ಪದೆ ಪದೆ ಬಳಕೆ ಮಾಡಬೇಕಿರುತ್ತದೆ, ಇದಕ್ಕೆ ಕಾರಣವೇನು ?

ಸತತ ರಾಸಾಯನಿಕಗಳ ಬಳಕೆಯಿಂದ ಭೂಮಿ/ಮಣ್ಣು ಗಟ್ಟಿಗೊಳ್ಳುವ ಕಾರಣ, ನೀರು ಮಣ್ಣಿನಲ್ಲಿ ಇಳಿಯದ ಕಾರಣ ಬೆಳೆಗೆ ನೀಡಿರುವ ನೀರು ಭೌತಿಕವಾಗಿ ಮೇಲ್ನೋಟಕ್ಕೆ ಹೆಚ್ಚಾಗಿ ಕಾಣುತ್ತದೆ., ಇದರಿಂದ ಮಣ್ಣಿನ ತೇವಂಶ ಹೆಚ್ಚಿಸಲು ಪದೆ ಪದೆ ನೀರು ಅತಿ ಕಡಿಮೆ ಅಂತರದಲ್ಲಿ ನೀಡಬೇಕಿರುತ್ತದೆ.

18. ಯಾವುದೇ ಗಿಡ, ಮರ ಅಥವಾ ಬೆಳೆಗಳಿಗೆ ಬೇಕಿರುವ ಪೋಷಕಗಳು ಯಾವುವು ?

ಇದುವರೆವಿಗು ನಡೆದಿರುವ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಕೆಳೆಗೆ ನೀಡಿರುವ ಪೋಷಕಗಳು ಯಾವುದೇ ಗಿಡ, ಮರ ಅಥವಾ ಬೆಳೆಗೆ ಬೇಕಿರುತ್ತದೆ, ಆದರೆ ಪ್ರಮಾಣದಲ್ಲಿ ವ್ಯತ್ಯಾಸವಿರಬಹುದು. ಅವುಗಳನ್ನು ಮುಖ್ಯ, ದ್ವಿತಿಯ ಮತ್ತು ಲಘು(ಸೂಕ್ಷ್ಮ) ಪೋಷಕಾಂಶಗಳೆಂದು ವಿಂಗಡಿಸಲಾಗಿದೆ.

ಮುಖ್ಯ ಪೋಷಕಾಂಶಗಳು:ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಇವು ಹೆಚ್ಚಿನ ಮಪ್ರಮಾಣದಲ್ಲಿ ಬೇಕಿರುವ ಕಾರಣ ಇವನ್ನು ಮುಖ್ಯ ಪೋಷಕಗಳೆಂದು ಕರೆಯಲಾಗುತ್ತದೆ.

ದ್ವಿತಿಯ ಪೋಷಕಾಂಶಗಳು: ಮೆಗ್ನೀಷಿಯಂ, ಕ್ಯಾಲ್ಷಿಯಂ ಮತ್ತು ಸಲ್ಫರ್

ಸೂಕ್ಷ್ಮ ಪೋಷಕಾಂಶಗಳು: ಬೋರಾನ್, ಕ್ಲೋರಿನ್, ಮ್ಯಾಂಗನೀಸ್, ಕಬ್ಬಿಣ, ನಿಕ್ಕೆಲ್, ಸತು, ತಾಮ್ರ ಮತ್ತು ಮ್ಯಾಲಿಬ್ಡಿನಂ.

ಗೊಬ್ಬರವಲ್ಲದ ಪೋಷಕಗಳು: ಆಮ್ಲಜನಕ, ಜಲಜನಕ ಮತ್ತು ಇಂಗಾಲ

19. ಬೆಳೆಯಲ್ಲಿ ಯೂರಿಯಾ ಅಥವಾ ಸಾರಜನಕದ ಪಾತ್ರವೇನು ?

ಸಾರಜನಕ ಅಥವಾ ಯೂರಿಯಾ ವಾತಾವರಣದಲ್ಲಿ ಹೆಚ್ಚಿಗೆ ಸಿಗುವ ಅಂಶವಾಗಿದೆ, ಯಾವುದೇ ಬೆಳೆಯಲ್ಲಿ ಇದರ ಪಾತ್ರ ಬಹಳ ಮುಖ್ಯ. ಇದು ಪ್ರೋಟೀನ್ ಗಳನ್ನು ಸಂಶ್ಲೇಷಿಸಿ ಮೊದಲ ಹಂತದ ಬೆಳವಣಿಗೆ ಮತ್ತು ಇಳುವರಿಯಲ್ಲಿ ಉಪಯೋಗವಾಗುತ್ತದೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ.

20. ಬೆಳೆಯಲ್ಲಿ ರಂಜಕದ ಪಾತ್ರವೇನು ?

ಈಗಿನ ವೈಜ್ಞಾನಿಕ ಸಂಶೋದನೆಗಳ ಪ್ರಕಾರ ಸಸ್ಯಕೋಶಗಳ ವಿಭಜನೆ ಮತ್ತು ಶಕ್ತಿಯುತ ರಚನೆಗೆ ರಂಜಕದ ಪಾತ್ರ ಬಹಳ ಮುಖ್ಯ, ಆದುದರಿಂದ ಇದು ಮುಖ್ಯ ಪೋಷಕವಾಗಿ ಗುರುತಿಸಲಾಗಿದೆ.

21. ಬೆಳೆಯಲ್ಲಿ ಪೊಟ್ಯಾಷ್ ಪಾತ್ರವೇನು ?

ಪೊಟ್ಯಾಷ್ ಸಸ್ಯಪೋಷಕಗಳ ಸಾರಿಗೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ ಮತ್ತು ಸಸ್ಯಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಪಡುತ್ತದೆಂದು ಈಗಿನ ವೈಜ್ಞಾನಿಕ ಮೂಲಗಳಿಂದ ತಿಳಿದು ಬಂದಿದೆ.

22. ಬೆಳೆಯಲ್ಲಿ ಕ್ಯಾಲ್ಷಿಯಂ ಪಾತ್ರವೇನು ?

ಈ ಪೋಷಕಾಂಶವು ಸಸ್ಯಕೋಶಗಳನ್ನು ದೃಢಗೊಳಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

23. ಬೆಳೆಯಲ್ಲಿ ಗಂಧಕ (ಸಲ್ಫರ್) ಪಾತ್ರವೇನು ?

ಗಂಧಕ (ಸಲ್ಫರ್) ಪೋಷಕವು ಅಮೈನೋ ಆಮ್ಲಗಳನ್ನು ವಿಭಜಿಸುವ ಕಾರ್ಯದಲ್ಲಿ ಅತಿ ಮುಖ್ಯ ಕಾರ್ಯವನ್ನು ಮಾಡುತ್ತದೆಂದು ಈಗಿನ ಸಂಶೋಧನೆಗಳು ತಿಳಿಸಿವೆ.

24. ಬೆಳೆಯಲ್ಲಿ ಮೆಗ್ನೀಷಿಯಂ ಪಾತ್ರವೇನು ?

ಮೆಗ್ನೀಷಿಯಂ ಸೂಕ್ಷ್ಮ ಪೋಷಕವಾಗಿದ್ದು ಸಸ್ಯದ ಹರಿತ್ತಿನ (ಕ್ಲೋರೋಫಿಲ್) ಕೇಂದ್ರ ಅಣುವಾಗಿ ವರ್ತಿಸುತ್ತದೆಂದು ವೈಜ್ಞಾನಿಕ ಮೂಲಗಳು ತಿಳಿಸುತ್ತವೆ.

25. ಬೆಳೆಯಲ್ಲಿ ಕಬ್ಬಿಣದ ಪಾತ್ರವೇನು ?

ಕಬ್ಬಿಣ ಸಸ್ಯ ಹರಿತ್ತನ್ನು ವಿಭಜಿಸುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆಂದು ವೈಜ್ಞಾನಿಕ ಮೂಲಗಳು ತಿಳಿಸಿವೆ. ಈ ಕಾರಣದಿಂದ ಕಬ್ಬಿಣದ ಅಂಶಹೆಚ್ಚಿದ ಗಿಡಗಳು ಕಡು ಹಸಿರಾಗಿ ಕಾಣಿಸುತ್ತವೆ.

26. ವ್ಯವಸಾಯದಲ್ಲಿ ಮ್ಯಾಂಗನೀಸ್ ಪಾತ್ರವೇನು ?

ಇಂದಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಮ್ಯಾಂಗನೀಸ್ ಪೋಷಕಾಂಶವು ಸಸ್ಯದ ದ್ಯೂತಿಸಂಶ್ಲೇಷಣಾ ಕ್ರಿಯೆಗೆ ಸಹಾಯಪಡುವ ಪೋಷಕವಾಗಿದೆ.

27. ಬೋರಾನ್ ಪಾತ್ರವೇನು ?

ಇಂದಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಬೋರಾನ್ ನಿಂದಾಗಿ ಸಸ್ಯಕೋಶಗಳು ರಚನೆಗೊಳ್ಳುತ್ತವೆ, ಬೀಜ ಮೊಳಕೆಯೊಡೆಯುವ ಸಾಮರ್ಥ್ಯ ಹೆಚ್ಚಿಸುತ್ತೆ, ಪರಾಗವು(POLLEN) ಉದ್ದವಾಗಿ ಬೆಳೆಯಲು ಅನುಕೂಲ ಮಾಡುತ್ತದೆ, ಪೋಷಕಗಳ ಸಾಗಣೆಯಲ್ಲಿ ಮತ್ತು ಚಯಾಪಚಯ(METABOLISM) ಕ್ರಿಯೆಯಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತದೆ.

28. ಸತು (ZINC) ಪಾತ್ರವೇನು ?

ಇಂದಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಸತು(ZINC) ಬೆಳವಣಿಗೆ ಪ್ರವರ್ಧಕವಾಗಿ, ಬುಡ ಉದ್ದವಾಗಿ ಬೆಳೆಯಲು ಸಹಾಯ ಪಡುತ್ತದೆ ಮತ್ತು ಸಸ್ಯ ಅತಿ ಕಡಿಮೆ ಉಷ್ಣಾಂಶವನ್ನು ತಡೆದುಕೊಳ್ಳಲು ಸಹಾಯಪಡುತ್ತದೆ.

29. ತಾಮ್ರ (COPPER) ಪಾತ್ರವೇನು ?

ಇಂದಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಸಾರಜನಕ ಮತ್ತು ಕಾರ್ಬೊಹೈಡ್ರೇಟ್ ಗಳ ಚಯಾಪಚಯ ಕ್ರಿಯೆಯನ್ನು ಹೆಚ್ಚು ಪ್ರಭಾವಿತಗೊಳಿಸುತ್ತದೆ.

30.ಮೊಲಿಬ್ಡಿನಂ ಪಾತ್ರವೇನು ?

ಇಂದಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಇದು ನೈಟ್ರೇಟ್ ರಿಡಕ್ಟೇಸ್ ಮತ್ತು ನೈಟ್ರೊಜಿನೇಸ್ ಕಿಣ್ವಗಳ ಘಟಕವಾಗಿ ವರ್ತಿಸಿ, ಗಿಡಗಳ ಬೆಳವಣಿಗೆಗೆ ಸಹಯಕಾರಿಯಾಗಿರುತ್ತದೆ.